1589-1638. ಹದಿನೇಳನೆಯ ಶತಮಾನದ ಆದಿಯಲ್ಲಿದ್ದ ಸರ್ಬೋ-ಕ್ರೋಟ್ ಕವಿ. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಈತ ಶ್ರೇಷ್ಠಮಟ್ಟದ ಗ್ರೀಕ್ ಮತ್ತು ಲ್ಯಾಟಿನ್ ಭಾಷಾ ಸಾಹಿತ್ಯಗಳ ಜ್ಞಾನವನ್ನು ಪಡೆದಿದ್ದ. ತನ್ನ ಸ್ವಂತ ಊರಾದ ರೆಗೂಸಾದಲ್ಲಿ ಉನ್ನತ ಅಧಿಕಾರ ಸ್ಥಾನಗಳನ್ನು ಅಲಂಕರಿಸಿದ್ದ.
ಈತನ ಕಾವ್ಯರಚನೆ ಕ್ರೈಸ್ತಧರ್ಮವನ್ನು ಕುರಿತದ್ದಾಗಿದೆ. 1621ರಲ್ಲಿ ಹಳೆಯ ಒಡಂಬಡಿಕೆಯಲ್ಲಿರುವ ಸ್ತುತಿಪದ್ಯವನ್ನು ಅವಲಂಬಿಸಿ ದಿ ಪೆನಿಟೆನ್ಷಿಯಲ್ ಸಾಂಗ್ ಆಫ್ ಕಿಂಗ್ ಡೇವಿಡ್ (ದೊರೆ ಡೇವಿಡನ ಪಶ್ಚಾತ್ತಾಪ ಪದ) ಎಂಬ ಕವನವನ್ನು ಬರೆದ. 1622ರಲ್ಲಿ ದಿ ಟಿಯರ್ಸ್‌ ಆಫ್ ದಿ ಪ್ರಾಡಿಗಲ್ ಸನ್ (ದುಂದುಗಾರ ಮಗನ ಕಂಬನಿ) ಎಂಬ ಕೃತಿ ಪ್ರಕಟಗೊಂಡಿತು. ಈ ಕವಿ ರಚಿಸಿದ ಆಸ್ಮಾನ್ ಎಂಬ ಮಹಾ ಕಾವ್ಯ ಈತನ ಅತ್ಯುತ್ತಮ ಕೃತಿ ಎನಿಸಿದೆ. ಇದು ಇಪ್ಪತ್ತು ಸರ್ಗಗಳನ್ನು ಒಳಗೊಂಡಿರುವ ಕಾವ್ಯ. ಇದರ 14 ಮತ್ತು 15ನೆಯ ಸರ್ಗಗಳು ಈಗ ಲಭ್ಯವಿಲ್ಲ. ಈ ಮಹಾಕಾವ್ಯ ತುರ್ಕಿಯ ದೊರೆ ಆಸ್ಮಾನ್ ಮತ್ತು ಆತನ ಆಡಳಿತ ಕಾಲದಲ್ಲಿ ನಡೆದ ಕ್ರೈಸ್ತರ ಹಾಗೂ ಮಹಮ್ಮದೀಯರ ಕಾಳಗವನ್ನು ಕುರಿತದ್ದಾಗಿದೆ. ಇದು ಇಟಾಲಿಯನ್ ಮಹಾಕವಿ ಟಾಸೊನ ಮಹಾಕಾವ್ಯವನ್ನು ಅನುಸರಣೆ ಮಾಡಿ ರಚಿತವಾದ ಕೃತಿ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ